ಸೋಮವಾರ, ನವೆಂಬರ್ 6, 2017

ಏನಿದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ?

  "ಗೋ" (Go) ಚೀನಾದ ಅತ್ಯಂತ ಪುರಾತನ ಬೋರ್ಡ್ ಆಟ. ಇದು ಸುಮಾರು ೨೫೦೦ ವರ್ಷ ಹಳೆಯದಾಗಿದ್ದು, ಈಗಲೂ ಚೀನಾ, ದಕ್ಷಿಣ ಕೊರಿಯಾ, ಜಪಾನ್ ಹಾಗು ಬೇರೆ ದೇಶಗಳಲ್ಲಿ ಪ್ರಚಲಿತವಾಗಿದೆ. ಇದು ಅತ್ಯಂತ ಕಠಿಣ ಹಾಗು ಬೌದ್ಧಿಕ ಸಾಮರ್ಥ್ಯದ ಆಟ. ಒಂದೊಂದು ಸಲ ಎರಡೆರಡು ದಿನವಾದರೂ ಆಟ ಮುಗಿಯುವುದಿಲ್ಲ. ಚೆಸ್ನಂತೆ ಗೋ ಆಟದ ಗ್ರಾಂಡ್ ಮಾಸ್ಟರ್ಗಳಿದ್ದಾರೆ. ಚೀನಾದ ಕೀ ಜೀ ಗೋನಲ್ಲಿ ಜಗತ್ತಿಗೇ ನಂಬರ್ ಒನ್.
   ಇದೇ ಕಳೆದ ಮೇನಲ್ಲಿ ನಡೆದ ಪಂದ್ಯದಲ್ಲಿ,  ಕೀ ಜೀ ಸೋಲನ್ನು ಅನುಭವಿಸಬೇಕಾಯಿತು. ಈತನನ್ನು ಸೋಲಿಸಿದುದು ಮನುಷ್ಯನಲ್ಲ, ಕಂಪ್ಯೂಟರ್! ಗೂಗಲ್ನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್  (AI) ಸಾಫ್ಟ್ವೇರ್ "ಅಲ್ಫಾ ಗೋ"(AlphaGo). ಯಾವುದು ಅಸಾಧ್ಯವೆಂದು ತಿಳಿದಿದ್ದರೋ ಅದನ್ನೇ ಸಾಧಿಸಿತು AI ಸಾಫ್ಟ್ವೇರ್.

ಕೀ ಜೀ ಹಾಗೂ ಅಲ್ಫಾ ಗೋ ನಡುವೆ ಬಿರುಸಿನ ಆಟ

   "ಆರ್ಟಿಫಿಷಿಯಲ್ ಇಂಟೆಲಿಜೆನ್ಸ್" (ಕೃತಕ ಬುದ್ಧಿ ಸಾಮರ್ಥ್ಯ) - AI ಈ ಶಬ್ದಗಳನ್ನು ದಿನದಲ್ಲಿ ಒಂದು ಸಲವಾದರೂ ಕೇಳುತ್ತೇವೆ. ಇಲ್ಲಿಯವರೆಗೆ ಕಂಪ್ಯೂಟರ್, ಮೊಬೈಲುಗಳು ಮಾಡುತ್ತಿರುವ ಅಮೋಘ ಕೆಲಸಗಳಿಂದ ಹೇಗಿದು ಭಿನ್ನ?

   ಎಲ್ಲರಿಗೂ ತಿಳಿದಿರುವಂತೆ ಕಂಪ್ಯೂಟರ್ನ ಮಿದುಳು ಸಾಫ್ಟ್ವೇರ್. ಸಾಫ್ಟ್ವೇರಿನಲ್ಲಿ ಕಂಪ್ಯೂಟರ್ ಏನೇನು ಮಾಡಬೇಕು, ಹೇಗೆ ಮಾಡಬೇಕು ಅಂತೆಲ್ಲ ನಿರ್ದೇಶನಗಳಿರುತ್ತವೆ (ಕೋಡ್) . ನಿರ್ದೇಶನಗಳಂತೆ ಕಂಪ್ಯೂಟರ್ ಯಥಾವತ್ತಾಗಿ ಕೆಲಸ ಮಾಡುತ್ತದೆ. ಕೂಡಿಸು ಅಂದ್ರೆ ಕೂಡಿಸು, ಗುಣಿಸು ಅಂದ್ರೆ ಗುಣಿಸು. ಇದು ನಾವು ನೋಡುವ ಸಾಮಾನ್ಯ ಸಾಫ್ಟ್ವೇರಿನ ಲಕ್ಷಣ.

   ಇನ್ನು AI ವಿಚಾರಕ್ಕೆ ಬಂದಾಗ, ಇದು ಕೂಡ ಸಾಫ್ಟ್ವೇರ್. ಆದರೆ ವಿಶೇಷ ಸಾಫ್ಟ್ವೇರ್. ಈ ಸಾಫ್ಟ್ವೇರ್ನ್ನು ಮಗುವಿಗೆ ಹೋಲಿಸಬಹುದು. ಮಗು ತನ್ನ ಮನೆ ಮಂದಿ, ಶಾಲೆ, ಸುತ್ತ ಮುತ್ತಲಿನ ವಾತಾವರಣದಿಂದ ತನ್ನ ಬೌದ್ಧಿಕ ಸಾಮರ್ಥ್ಯದಲ್ಲಿ ಬೆಳವಣಿಗೆ ಕಾಣುತ್ತದೆ. ಅದೇ ರೀತಿ AI ಕೂಡ. ಅದು ಕೂಡ ಹೆಚ್ಚು ಹೆಚ್ಚು ಮಾಹಿತಿಯನ್ನು ಓದಿ, ತಿಳಿದು ತನ್ನ ಕಾರ್ಯ ಕ್ಷಮತೆಯನ್ನು ವೃದ್ಧಿಸಿಕೊಳ್ಳುತ್ತದೆ.

   ಜೀವನದಲ್ಲಿ ಕಠಿಣ ಪರೀಕ್ಷೆಗಳು ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅದೇ ರೀತಿ AI ಕೂಡ ತನಗೆ ಒಡ್ಡಿದ ಪರೀಕ್ಷೆಗಳಿಗೆ ತಕ್ಕಂತೆ ತನ್ನ ಸಾಮರ್ಥ್ಯ ಹೆಚ್ಚಿಸುತ್ತ ಹೋಗುತ್ತದೆ. ಗೋ ನಲ್ಲಿ ಗೆದ್ದ ಅಲ್ಫಾ ಗೋ ಸಾಫ್ಟ್ವೇರ್ ಕೂಡ ಮೊದಲು ಎಷ್ಟೋ ಸಲ ಸೋಲುಂಡಿಯೇ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದು.

   ಇಂದು ನಮ್ಮ ಜೀವನದ ಹಲವು ಕ್ಷೇತ್ರಗಳನ್ನು AI ಆವರಿಸುತ್ತಿದೆ. AI ಕೇವಲ ರೋಬೋಟ್ಗಳಿಗೆ ಸೀಮಿತವಾಗಿಲ್ಲ. ಅದು ಸ್ವಯಂ ಚಾಲಿತ ಡ್ರೈವರ್ ರಹಿತ ಕಾರ್ ಆಗಿರಬಹುದು, ಶಾಪಿಂಗ್ ಪಾರ್ಸೆಲ್ ತಲುಪಿಸುವ ಡ್ರೋನ್ ಆಗಿರಬಹುದು, ಸಮೂಹ ಮಾಧ್ಯಮಗಳ ಮೂಲಕ ನಿರ್ದಿಷ್ಟ ಪ್ರದೇಶದ ಜನರ ಮೂಡ್ ತಿಳಿಯುವುದುದಾಗಿರಬಹುದು, ಮುಖ ಅಥವಾ ಧ್ವನಿ ಗುರುತಿಸುವದಾಗಿರಬಹುದು, ಭಾಷಾಂತರ ಆಗಿರಬಹುದು, ಬರವಣಿಗೆ ಗುರುತಿಸುವುದಾಗಿರಬಹುದು, ರೋಗಗಳ ತೀವ್ರತೆಯನ್ನು ಸಮಯವಿರುವಾಗಲೇ ಪತ್ತೆ ಮಾಡುವುದು, ವೈಯಕ್ತಿಕ ಹಣಕಾಸು ಸಲಹೆಗಳನ್ನು ನೀಡುವ ಆಪ್ ಆಗಿರಬಹುದು, ಜಗತ್ತಿನ ಪ್ರಮುಖ ಸುದ್ದಿಗಳ ಗೂಗಲ್ ನ್ಯೂಸ್ ಆಗಿರಬಹುದು, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಗೂಗ್ಲ್ನ ಅಸಿಸ್ಟೆಂಟ್ ಅಥವಾ ಆಪಲ್ನ ಸಿರಿ ಆಗಿರಬಹುದು... ಇತ್ಯಾದಿ 

   ಹೀಗೆ AI ಹಲವು ದಿನ ನಿತ್ಯದ ಕೆಲಸಗಳನ್ನು ಯಾಂತ್ರಿಕರಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ನಿರುದ್ಯೋಗದ ಭಯ ಹುಟ್ಟಿರುವುದು ನಿಜವಾದರೂ, ಹೊಸ ಕೆಲಸಗಳು, ಹೊಸ ಕೌಶಲ್ಯಗಳನ್ನು ಕಲಿಯಬೇಕಾಗಿರುವುದೂ ಅಷ್ಟೇ ನಿಜ.    ಪ್ರತಿಯೊಂದು ಆವಿಷ್ಕಾರ, ಸಂಶೋಧನೆ ಜೊತೆಗೆ ಅದರದೇ ಆದ ಉಪಯೋಗ ಹಾಗು ದುರುಪಯೋಗಗಳು ಜೊತೆಯಲ್ಲಿರುತ್ತವೆ. ಇದಕ್ಕೆ AI ಹೊರತಾಗಿಲ್ಲ. ಅದನ್ನು ಮತ್ತ್ಯಾವಾಗಾದ್ರು ಚರ್ಚಿಸೋಣ.

ಬುಧವಾರ, ನವೆಂಬರ್ 1, 2017

ಕನ್ನಡ ಉಳಿಸಿ ಬೆಳೆಸಲು ನಾನು ಮಾಡಬಹುದಾದ ಮೂರು ಕೆಲಸಗಳು

ಕನ್ನಡ ಉಳಿಸಿ ಬೆಳೆಸಲು ನಾನು ಮಾಡಬಹುದಾದ ಮೂರು ಕೆಲಸಗಳು:

   ೧. ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುವುದಕ್ಕೆ  ಪ್ರೇರೇಪಿಸುವುದು
ಕನ್ನಡ ಭಾಷೆ ಕೇವಲ ಮಾತುಕತೆಯ ಮಾಧ್ಯಮವಲ್ಲ. ಅದು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದ ತಳಹದಿ. ಪ್ರತಿಯೊಂದು ಭಾಷೆ ತನ್ನ ಜೊತೆ ತನ್ನ ಜನ್ಮ ಸ್ಥಳದ ಸಂಸ್ಕೃತಿ, ಆಚಾರ, ಹಾಗೂ ವಿಚಾರಗಳನ್ನು ಬಳುವಳಿಯಾಗಿ ಹೊತ್ತು ತರುತ್ತದೆ.
ಇದಕ್ಕೆ ಇಂಗ್ಲಿಷ್, ಹಿಂದಿ, ಅಥವಾ ಮತ್ತ್ಯಾವುದೇ ಭಾಷೆ ಹೊರತಾಗಿಲ್ಲ. ಇದನ್ನು ಅರ್ಥ ಮಾಡಿಕೊಂಡರೆ ಗೊಂದಲಮಯ ರೋಬೋಟ್ಗಳ ಬದಲಾಗಿ ಸುಸಂಸ್ಕ್ರತ ನಾಗರಿಕರ ನಿರ್ಮಾಣ ಸಾಧ್ಯವಾದೀತು. ಇಲ್ಲಿ "ಗೊಂದಲಮಯ ರೋಬೋಟ್" ಯಾಕಂದ್ರೆ ಇವ್ರು ಬೆಳೆಯುವುದು ಕನ್ನಡ ವಾತಾವರಣದಲ್ಲಿ ಆದರೆ ತಲೆಯಲೆಲ್ಲಾ ಬೇರೆ ಭಾಷೆ, ಸಂಸ್ಕೃತಿ ! 


   ೨. ಕೆಲವಂದು ಅನಿವಾರ್ಯ ಸಂಧರ್ಭಗಳನ್ನು ಹೊರತುಪಡಿಸಿ, ಎಲ್ಲ ಕಡೆ ಕನ್ನಡ ಬಳಕೆ
ನಮ್ಮ ಭಾಷೆಯನ್ನು ಉಳಿಸಿ ಬೆಳೆಸಲು, ಮೊದಲನೆಯದಾಗಿ ಕನ್ನಡದಲ್ಲಿ ಹೆಮ್ಮೆಯಿಂದ ಮಾತಾಡುವುದನ್ನು ಕಲಿಯಬೇಕು. ಇದಕ್ಕೆ ನಮ್ಮ ಸಂಸ್ಕೃತಿ, ಪರಂಪರೆಯ ಜ್ನ್ಯಾನ ಹಾಗು ಸ್ವಲ್ಪ ಧೈರ್ಯ, ತಾಳ್ಮೆ  ಅಗತ್ಯ. ನಮ್ಮ ಗೌರವಯುತ ಪರಂಪರೆಯ ಅರಿವು ನಮ್ಮಲಿ ಹೆಮ್ಮೆ ಮೂಡಿಸುವುದು. ಈ ಕೆಲಸ ನಮ್ಮ ಪಠ್ಯ, ಸಮಾಜದ ಹಿರಿಯರು, ಸಮೂಹ ಮಾಧ್ಯಮಗಳು ವ್ಯವಸ್ಥಿತ ರೀತಿಯಲ್ಲಿ ಮಾಡಿದರೆ ಸಾಧ್ಯವಾದೀತು. ಕನಿಕರ ಕನ್ನಡತನ ನಿಲ್ಲಬೇಕು! ಕನ್ನಡ ನಾಡಿನಲ್ಲಿ ನೆಲೆಸಿದವರು ಕನ್ನಡವನ್ನು ಕಲಿತು ಮಾತನಾಡಲು ಪ್ರಯತ್ನಿಸಬೇಕು. ಕೆಲವೊಂದು ಸನ್ನಿವೇಶಗಳನ್ನು ಹೊರತುಪಡಿಸಿ,  ಕನಿಕರದಿಂದ ಪರ ಭಾಷಿಕರ ಜೊತೆ ಅವರದೇ ಭಾಷೆಯಲ್ಲಿ ಮಾತಾಡುವುದನ್ನು ನಿಲ್ಲಿಸಬೇಕು.

   ೩. ಅಂತರ್ಜಾಲದಲ್ಲಿ ಕನ್ನಡ ಪ್ರಚಾರ ಹಾಗೂ ಪ್ರಸಾರ
ಕನ್ನಡದಲ್ಲಿ ಶಬ್ದ ಸಂಗ್ರಹಕ್ಕೆ ಯಾವುದೇ ಕೊರತೆ ಇಲ್ಲ. ಶಿವರಾಂ ಕಾರಂತರ ಹಲವು ಆವೃತ್ತಿಯ "ವಿಜ್ಞಾನ ಪ್ರಪಂಚ " ಎಷ್ಟು ಜನರಿಗೆ ಗೊತ್ತು? ವಿಜ್ಞಾನದ ಪ್ರತಿಯೊಬ್ಬ ವಿದ್ಯಾರ್ಥಿ ಓದಲೇ ಬೇಕಾದ ಜ್ಞಾನದ ಕಣಜಗಳು. ಕನ್ನಡದಲ್ಲಿ ಹಲವು ವೈಜ್ಞಾನಿಕ ಪದಗಳು ಆ ಗ್ರಂಥಗಳಲ್ಲಿವೆ. ಆದರೂ ಬದಲಾದ ಸನ್ನಿವೇಶಕ್ಕೆ, ಹೊಸ ಪದಗಳ ಜೋಡಣೆ ಆಗಬೇಕು. ಇವತ್ತು ಯಾವುದೇ ಒಂದು ಪದಕ್ಕೆ ಕನ್ನಡ ಸಮಾನಾರ್ಥಕ್ಕೆ ಯಾರನ್ನು ಸಂಪರ್ಕಿಸುವುದು? ಅಧಿಕೃತ ಕನ್ನಡ ರತ್ನ ಕೋಶದ ಆನ್ಲೈನ್ ಆವೃತ್ತಿ ರಚಿಸಬೇಕು. ಕನ್ನಡ ಪದಗಳ ಅಧಿಕೃತ ಕೇಂದ್ರೀಕೃತ ಉಲ್ಲೇಖ ವಿಭಾಗ ರಚನೆಯಾಗಬೇಕು. ಹೊಸ ಪದಗಳ ಬಗ್ಗೆ ಚರ್ಚೆ, ವಾದ, ಸಂವಾದಗಳಾಗಬೇಕು. ಸಮೂಹ ಮಾಧ್ಯಮಗಳಲ್ಲಿ ಹೊಸ ಪದ ಜೋಡಣೆಯ ಘೋಷಣೆಯಾಗಬೇಕು.
ಕನ್ನಡ ವಿಕಿಪೀಡಿಯದಲ್ಲಿ ನಮ್ಮಮ್ಮ ಪ್ರದೇಶ, ಜನ, ಹಬ್ಬ ಇತ್ಯಾದಿಗಳ ಬಗ್ಗೆ ಬರೆಯುವುದು. 

   ನಮ್ಮ ಭಾಷೆ, ಸಂಸ್ಕೃತಿ, ಇತಿಹಾಸದ  ಬಗ್ಗೆ ತಿಳಿವು ಹಾಗೂ ಹೆಮ್ಮೆ  ಇದ್ದಾಗ ಮಾತ್ರ ಕನ್ನಡ ರಾಜ್ಯೋತ್ಸವ ಸಾರ್ಥಕವಾದಿತು!

ಸೋಮವಾರ, ಅಕ್ಟೋಬರ್ 31, 2016

ಓದುವುದು ಹೇಗೆ? - ಓದಿನ ಕೆಲವು ಉಪಯುಕ್ತ ವಿಧಾನಗಳು

    ರೀಕ್ಷೆಗಳು ಹತ್ತಿರ ಬಂದ ಹಾಗೆ, ವಿದ್ಯಾರ್ಥಿಗಳಿಗಾಗಿ  ಏಕಾಗ್ರತೆ, ಓದಿನ ಬಗ್ಗೆ ಇತ್ಯಾದಿ ವಿಶೇಷ ಲೇಖನಗಳು ಮೂಡಿ ಬರುವುದು ಸಹಜ. ಆ ಎಲ್ಲ ಲೇಖನಗಳು ಶೈಕ್ಷಣಿಕ ವರ್ಷದ ಆರಂಭದಲ್ಲೋ ಅಥವಾ ಪರೀಕ್ಷೆಗೆ ಸಾಕಷ್ಟು ಸಮಯವಿರುವಾಗ ಬಂದರೆ ಸಾರ್ಥಕವಾಗುವುದು
   ಇತ್ತೀಚಿಗೆ Coursera ದಲ್ಲಿ “Learning How To Learn” ಕೋರ್ಸ್ ಮಾಡಿದ್ದೆ. ಅಲ್ಲಿ ನಾನು ಕಲಿತದ್ದು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಹಾಗೂ ಯಾವುದೇ ಹೊಸದನ್ನು ಕಲಿಯುವವರಿಗೆ ಅತ್ಯಂತ ಸಹಾಯಕರಿಯಾಗಬಲ್ಲುದು.
   ಈ ಮೇಲಿನ ಎರಡು ಕಾರಣಗಳಿಂದ ಈ ಲೇಖನ.
ಓದುವುದು ಹೇಗೆ?
    ಇದನ್ನು ತಿಳಿಯುವುದಕ್ಕಿಂತ ಮೊದಲು, ಮೆದುಳಿನ ಸರಳ ಸ್ಮರಣ ಶಕ್ತಿ ಸಂರಚನೆಯನ್ನು ತಿಳಿಯುವುದು ಒಳಿತು.
   ಮೆದುಳಿನ ಸ್ಮರಣ ಶಕ್ತಿಯನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು:
  • ಅಲ್ಪ ಕಾಲಿಕ ಸ್ಮರಣ ಶಕ್ತಿ ಭಾಗ
  • ದೀರ್ಘ ಕಾಲಿಕ ಸ್ಮರಣ ಶಕ್ತಿ ಭಾಗ
   ಯಾವುದಾದರು ಹೊಸದೊಂದನ್ನು ಕಲಿಯುವಾಗ, ಅದು ಮೊದಲು ಅಲ್ಪ ಕಾಲಿಕ ಸ್ಮರಣ ಶಕ್ತಿ ಭಾಗದಲ್ಲಿ ಸಂಗ್ರಹವಾಗುತ್ತದೆ. ಈ ಭಾಗವು ಸಾಮಾನ್ಯವಾಗಿ ಸುಮಾರು ಬೆರಳನಿಕೆಯಷ್ಟು ಸಂಗತಿಗಳನ್ನು ಮಾತ್ರ ಹಿಡಿದಿಟ್ಟುಕೊಳ್ಳಬಹುದು. ಹಾಗಾಗಿ ಇದರ ವಿಸ್ತಾರ ತುಂಬಾ ಕಡಿಮೆ. ಇದರ ಪರಿಣಾಮಕಾರಿ ಉಪಯೋಗಕ್ಕಾಗಿ ಇದನ್ನು ಖಾಲಿಗೊಳಿಸುತ್ತಿರಬೇಕು. ಅದಕ್ಕೆ ಇಲ್ಲಿರುವ ಮಾಹಿತಿಯನ್ನು ದೀರ್ಘ ಕಾಲಿಕ ಸ್ಮರಣ ಶಕ್ತಿ ಭಾಗಕ್ಕೆ ವರ್ಗಾಯಿಸುವುದು. ಈ ಭಾಗವು ಅತ್ಯಂತ ವಿಶಾಲವಾಗಿದ್ದು, ಹೆಚ್ಚಿನ ಮಾಹಿತಿಯನ್ನು ದೀರ್ಘ ಸಮಯದವರೆಗೆ ಹಿಡಿದಿಟ್ಟುಕೊಳ್ಳಬಹುದು. ಹಾಗಾದರೆ ಅಲ್ಪ ಕಾಲಿಕ ಸ್ಮರಣ ಶಕ್ತಿ ಭಾಗದಿಂದ ದೀರ್ಘ ಕಾಲಿಕ ಸ್ಮರಣ ಶಕ್ತಿ ಭಾಗಕ್ಕೆ ಹೇಗೆ ವರ್ಗಾಯಿಸುವುದು ?
ಪುನರಾವರ್ತನೆ
   ಇವತ್ತು ಓದಿರುವದನ್ನು ಇವತ್ತೇ ನಾಲ್ಕು ಸಲ ಓದುವುದು ಪುನರಾವರ್ತನೆ ಅನ್ನಿಸುವುದಿಲ್ಲ. ಓದಿರುವ ವಿಷಯವನ್ನು ನಿರ್ದಿಷ್ಟ ಅವಧಿಯ ಅಂತರದಲ್ಲಿ ಪುನರಾವರ್ತಿಸುವುದು.
ಉದಾ:
 


ಈ ರೀತಿ, ವಿಷಯವನ್ನು ದೀರ್ಘ ಕಾಲಿಕ ಭಾಗಕ್ಕೆ ವರ್ಗಾಯಿಸಬಹುದು.
   ಈಗ ಪುನರಾವರ್ತನೆ ಮಾಡುವುದು ಹೇಗೆ ?
   ಅನೇಕರು ಓದಿದ ವಿಷಯವನ್ನು ಮತ್ತೆ ಪುಸ್ತಕ ತೆಗೆದು ಓದುತ್ತಾರೆ. ಇನ್ನು ಕೆಲವರು underline ಮಾಡಿದರೆ ಅದು ಮೆದುಳಿನಲ್ಲಿ ಅಚ್ಚಾಗುತ್ತೆ ಎಂದು ತಿಳಿಯುತ್ತಾರೆ. ಇವುಗಳೆಲ್ಲ ಪುನರಾವರ್ತನೆಯ ಪರಿಣಾಮಕಾರಿ ಪದ್ದತಿಗಳಲ್ಲ !
   Recall ಅಥವಾ ನೆನಪು ಮಾಡಿಕೊಳ್ಳುವುದು ಪುನರಾವರ್ತನೆಯ ಪರಿಣಾಮಕಾರಿ ಪದ್ದತಿ. ಇದನ್ನು ಪುಸ್ತಕ ನೋಡದೆ ಮಾಡಬೇಕು. ಅದಲ್ಲದೆ ಗೆಳೆಯರೊಡನೆ ಆ ವಿಷಯದ ಮೇಲೆ ಚರ್ಚೆ ಪರಿಣಾಮಕಾರಿ. ಮುನ್ನೆಚ್ಚರಿಕೆ: ನಿಮ್ಮ ಗೆಳೆಯರು ಆ ವಿಷಯವನ್ನು ಓದಿ ಕೊಂಡಿರಬೇಕು. ಇಲ್ಲವಾದರೆ ಚರ್ಚೆ ಹರಟೆಯಾಗುವ ಸಾಧ್ಯತೆ ಜಾಸ್ತಿ.
   ಈ ರೀತಿ ನಮಗೆ, ಯಾವ ವಿಷಯಗಳು ತಿಳಿದಿವೆ, ಇನ್ನು ಸರಿಯಾಗಿ ತಿಳಿಯಬೇಕಾಗಿದೆ ಎಂಬುದು ಸ್ಪಷ್ಟವಾಗುವುದು.
Recall ಮಾಡುವಾಗ, ಮೆದುಳಿನ ಮೇಲಿನ ಸೂಕ್ಷ್ಮ  ಒತ್ತಡ, ಅಲ್ಪ ಕಾಲಿಕ ಸ್ಮರಣ ಶಕ್ತಿ ಭಾಗದಿಂದ ದೀರ್ಘ ಕಾಲಿಕ ಸ್ಮರಣ ಶಕ್ತಿ ಭಾಗಕ್ಕೆ ವರ್ಗಾವಣೆ ಸಂಕೇತ.
ಇನ್ನು ಮೊದಲು ಕೇಳಿದಂತೆ ಓದುವುದು ಹೇಗೆ?
   ಅನೇಕರು ಒಂದೇ ವಿಷಯವನ್ನು ಒಂದೆರಡು ಗಂಟೆ ಸತತವಾಗಿ ಓದುತ್ತಾರೆ. ಆದರೆ ಇದು ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ.
ಪೊಮೊಡೋರೋ(Pomodoro) ಪದ್ದತಿ
   ಈ ಪದ್ದತಿಯನ್ನು Francesco Cirillo 1980ರ ದಶಕದಲ್ಲಿ ಅಭಿವೃದ್ಧಿಪಡಿಸಿದನು. ಈ ಪದ್ದತ್ತಿ, ಸಮಯ ನಿರ್ವಹಣೆ ಹಾಗೂ ಕಲಿಕೆಗಾಗಿ ಅತ್ಯಂತ ಸಹಾಯಕಾರಿ.
 

ಇದನ್ನು ಅನುಸರಿಸುವ ಕ್ರಮಗಳು:
1.       ಓದುವ ವಿಷಯವನ್ನು ನಿರ್ಧರಿಸಿ.
2.       ಯಾವುದೇ ಬಾಹ್ಯ ಗೊಂದಲಗಳಿಲ್ಲದೆ, ನಿರಂತರವಾಗಿ 25 ನಿಮಿಷ ಆ ವಿಷಯವನ್ನು ಓದಿ.
3.       ನಂತರ 3-5 ನಿಮಿಷ ಅಲ್ಪ ವಿರಾಮ.
4.       ಮತ್ತೆ 25 ನಿಮಿಷ ಓದು.
5.       ಹೀಗೆ ಮೇಲಿನ ಕ್ರಮಗಳನ್ನು ನಾಲ್ಕು ಬಾರಿ ಅನುಸರಿಸುವುದು.
6.       ನಂತರ ಒಂದು ದೀರ್ಘ ವಿರಾಮ (15-30 ನಿಮಿಷ).
             7.       ಬೇರೊಂದು ವಿಷಯವನ್ನು ಆಯ್ದುಕೊಂಡು ಮೇಲಿನ ಹಂತಗಳ ಪುನರಾವರ್ತನೆ.
 

ಈ ಕ್ರಮದಿಂದ ಮಾಡುವ ಕಾರ್ಯದಲ್ಲಿ ಅತ್ಯಂತ ಏಕಾಗ್ರತೆ ಮೂಡುವುದು ಹಾಗೂ ಚಿಕ್ಕ ಚಿಕ್ಕ ಸಾಧನೆಗಳ ಆಭಾಸವಾಗುವುದು. ಇದು ಮಾಡುವ ಕಾರ್ಯದಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವುದು.
   ಈ ಮೇಲೆ ತಿಳಿಸಿದ ಪದ್ದತಿಗಳ ಜೊತೆಗೆ ನಿತ್ಯ ವ್ಯಾಯಾಮ, ಪ್ರಾಣಾಯಾಮ (ಪ್ರಮುಖವಾಗಿ ಅನುಲೋಮ ವಿಲೋಮ) ಪರಿಣಾಮಕಾರಿ ಕಲಿಕೆಗೆ ಸಹಾಯಕಾರಿ.

ಪರಿಣಾಮಕಾರಿ ಕಲಿಕೆಯ ಹತ್ತು ಸೂತ್ರಗಳು 
  1.  Recall ಅಥವಾ ಕಲಿತದ್ದನ್ನು ನೆನಪು ಮಾಡಿಕೊಳ್ಳುವುದು. ಇದು ನೀವು ವಾಯು ವಿಹಾರಕ್ಕೆ ಹೋದಾಗ ಅಥವಾ ಬಸ್ಸಲ್ಲಿ ಪ್ರಯಾಣಿಸುವಾಗಲೂ ಆಗಿರಬಹುದು
  2.  ನಿಮ್ಮ ಕಲಿಕೆಯನ್ನು ಟೆಸ್ಟ್ ಗಳ ಮೂಲಕ ಪರೀಕ್ಷಿಸಿಕೊಳ್ಳಿ
  3. ಓದಿರುವ ವಿಷಯದ ಸತತ ಅಭ್ಯಾಸದಿಂದ ಅದರ ಎಲ್ಲ ಪ್ರಮುಖ ಅಂಶಗಳು ಥಟ್ಟನೆ ನೆನಪಾಗಿಸುವುದು (Chunking).
  4.  ಓದಿರುವ ವಿಷಯವನ್ನು ನಿರ್ದಿಷ್ಟ ಅವಧಿಯ ಅಂತರದಲ್ಲಿ ಪುನರಾವರ್ತಿಸುವುದು.
  5. ನಿರ್ದಿಷ್ಟ ಸಮಸ್ಯೆಯ ಬೇರೆ ಬೇರೆ ರೀತಿಯ ಪರಿಹಾರಗಳನ್ನು ವಿಶ್ಲೇಷಿಸುವುದು
  6. ಓದಿನ ನಡುವೆ ಅಲ್ಪ ವಿರಾಮ ತೆಗೆದುಕೊಳ್ಳುವುದು
  7. ಕಠಿಣ ಅನ್ನಿಸುವ ವಿಷಯಗಳನ್ನು ಸಾಮಾನ್ಯ ಸಂಗತಿಗಳ ಜೊತೆ ಹೋಲಿಸುವುದು (analogy). ಈ ವಿಷಯವನ್ನು ಒಂದು ಹತ್ತು ವರ್ಷದ ಮಗುವಿಗೆ ತಿಳಿಸಬೇಕಾದ್ರೆ ಹೇಗೆ ಹೇಳುತ್ತಿದೆ? ಎಂಬ ಯೋಚನೆಯಿಂದ ವಿಷಯವನ್ನು ಸರಳ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದು
  8.  ಬಾಹ್ಯ ಗೊಂದಲಗಳನ್ನು (ಮೊಬೈಲ್, ಇಂಟರ್ನೆಟ್, ಟಿವಿ ಇತ್ಯಾದಿ) ಆರಿಸಿ, 25 ನಿಮಿಷ ಅತ್ಯಂತ ಏಕಾಗ್ರತೆಯ ಓದು
  9.  ಕಠಿಣ ಎನಿಸುವ ವಿಷಯಗಳನ್ನು ಬೆಳಗಿನ ಸಮಯ ಓದುವುದು. 
  10. ಆಗಾಗ ನಿಮ್ಮ ಗುರಿಯನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವುದು. ಇದು ನಿಮಗೆ ಹೊಸ ಉತ್ಸಾಹ ಹಾಗೂ ವಿಶ್ವಾಸ ತುಂಬುವುದು
   ಕಲಿಕೆಯ ಇನ್ನಷ್ಟ್ಟು ವಿಧಾನಗಳು ಹಾಗೂ ಅವುಗಳ ಹಿಂದಿನ ವೈಜ್ನ್ಯಾನಿಕ ಕಾರಣಗಳಿಗಾಗಿ Coursera ಕೋರ್ಸ್ ನೋಡುವುದು.

ಆಕರ 
 Learning How to Learn : powerful mental tools to help you master tough subjects
University of California, San Diego
https://www.coursera.org/learn/learning-how-to-learn/



ಶುಕ್ರವಾರ, ಆಗಸ್ಟ್ 8, 2014

ಗುರಿ ಮತ್ತು ದಾರಿ

[ಆಕರ ಗ್ರಂಥ : ಬದುಕಲು ಕಲಿಯಿರಿ - ಸ್ವಾಮಿ ಜಗದಾತ್ಮಾನಂದ]

    ಪಶ್ಚಿಮದ ಪ್ರಸಿದ್ಧ ಸಂಗೀತಗಾರ ಬಿಥೊವೆನ್ ಒಮ್ಮೆ ಗಾನ ಗೋಷ್ಠಿಯನ್ನು ಮುಗಿಸಿ ಮೇಲೆದ್ದಾಗ ಅವನ ಅದ್ಭುತ ಕಲಾ ನೈಪುಣ್ಯವನ್ನು ಕಂಡು ಕೇಳಿ ಚಕಿತರಾದ ಜನರೂ, ಸ್ನೇಹಿತರೂ, ಅಭಿಮಾನಿಗಳೂ ಅವನನ್ನು ಸುತ್ತುವರಿದರು. ಅವರೆಲ್ಲರೂ ಮೂಕವಿಸ್ಮಿತರಾಗಿ ಅವನನ್ನೇ ಬೆರಗುಗಣ್ಣುಗಳಿಂದ ನೋಡುತ್ತಿದರು. ಪ್ರಶಂಸೆಯ ಮಾತುಗಳನ್ನು ಹೇಳಲಾರದಷ್ಟು ಭಾವತನ್ಮಯರಾಗಿದ್ದರು ಅವರೆಲ್ಲ. ತನ್ನ ನಾದಮಧುರ್ಯದಿಂದ ಅಷ್ಟೊಂದು ಜನರ ಹ್ರನ್ಮನಗಳನ್ನು ಸೆಳೆದಿದ್ದನಾತ. ಆ ಗಂಭೀರ ಮೌನವನ್ನು ಉತ್ಸಾಹಿ ಮಹಿಳೆಯೊಬ್ಬಳು ತನ್ನ ಮಾತಿನಿಂದ ಭೇಧಿಸಿದಳು; 'ಮಹಾಶಯ, ದೇವರು ನನಗೆ ಈ ಆಸಾಧಾರಣ ಪ್ರತಿಭೆಯ ಕೊಡುಗೆಯನ್ನು ಕೊಟ್ಟಿದರೆ ' ಎಂದವಳು ಉದ್ಗರಿಸಿದಳು.

    ಬಿಥೊವೆನ್ ಹೀಗೆಂದ 'ನನ್ನಲಿರುವುದೆಂದು ನೀನಂದುಕೊಡಿರುವ ಈ ಅಸಾಧಾರಣ ಪ್ರತಿಭೆ ದೇವರ ಕೊಡುಗೆ ಅನ್ನುತೀಯ, ನೀನೂ ಈ ಕೊಡುಗೆಯನ್ನು ಪಡೆಯಬಹುದು. ಏನು ಮಾಡಬೇಕು ಗೊತ್ತೇ? ದಿನವೂ ಎಂಟು ಗಂಟೆಗಳ ಕಾಲ ನಲ್ವತ್ತು ವರ್ಷಗಳವರೆಗೆ ಬಿಡದೇ ಪಿಯಾನೋ ಅಭ್ಯಾಸ ಮಾಡು. ಅಷ್ಟೇ ಸಾಕು, ನೀನು ನನ್ನಂತೆಯೇ ಅದ್ಬುತ ಕೊಡುಗೆಯನ್ನು ಪಡೆಯುತ್ತಿ.'



    ಈ ಅನುಭವದ ಮಾತಿನ ಹಿನ್ನೆಲೆಯಲ್ಲಿ ದಾರಿಯು ಸರಿಯಾಯಿತೆಂದರೆ ಗುರಿಯು ದೊರತೇ ದೊರೆಯುತದೆನ್ನುವ ಅಮರ ತತ್ವ ಅಡಗಿದೆಯಲ್ಲವೇ?

    ವಾಗ್ಗೇಯಕಾರ ಶ್ರೀ ವಾಸುದೇವಾಚಾರ್ಯರು ತಮ್ಮ 'ನೆನಪುಗಳು' ಎನ್ನುವ ಪುಸ್ತಕದಲ್ಲಿ ಪೀಟಿಲು ವಾದನದಲ್ಲಿ ಅದ್ವಿತಿಯರೆನಿಸಿಕೊಂಡ ಒಬ್ಬ ವಿದ್ವಾಂಸರನ್ನು ಸ್ಮರಿಸುತ್ತಾರೆ. ಅವರ ಹೆಸರು ಕೃಷ್ಣಯ್ಯರ್. ವಾದ್ಯ ಬಾರಿಸುವದರಲ್ಲಿ ಅವರಿಗೆ ಎಂಥ ಸ್ವಾಮಿತ್ವವಿತ್ತೆನ್ನುವುದಕ್ಕೆ ಆಚಾರ್ಯರು ತಾವು ಕಂಡ ಒಂದು ನಿದರ್ಶನವನ್ನಿತ್ತಿದ್ದಾರೆ. ಒಂದು ಕಛೇರಿಯಲ್ಲಿ  ಕೃಷ್ಣಯ್ಯರ್ ಪಕ್ಕವಾದ್ಯ ನುಡಿಸುತ್ತಿದಾಗ ಅಕಸ್ಮಾತ್ತಾಗಿ ಪಿಟೀಲಿನ ತಂತಿ ಕಿತ್ತು ಹೋಯಿತು. ತಾನು ಹಾಡಿದ ಸಂಗೀತವನ್ನು ನುಡಿಸಲು ಸಾಧ್ಯವಾಗದೆ ಬೇಕೆಂತಲೇ ತಂತಿಯನ್ನು ಕಿತ್ತು ಆಟ ಹೂಡಿದ್ದಾರೆ ಎಂಬರ್ಥದ ವ್ಯಂಗ್ಯ ನಗುವನ್ನು ಬೀರಿದ ಗಾಯಕ. ಕೃಷ್ಣಯ್ಯರ್ ಕೋಪದಿಂದ, 'ನಿಮ್ಮ ಸಂಗೀತಕ್ಕೆ ಪಕ್ಕವಾದ್ಯ ನುಡಿಸಲು ನಾಲ್ಕು ತಂತಿಗಳು ಬೇಕೇ? ಇದೋ ಇನ್ನೂ ಎರಡು ತಂತಿಯನ್ನು ಕಿತ್ತೆಸೆಯುತ್ತೇನೆ' ಎಂದು ಒಂದೇ ತಂತಿಯಲ್ಲಿ ಕಛೇರಿಯನ್ನು ನಿರ್ವಹಿಸಿದರಂತೆ. 

    ಈ ಅದ್ಭುತ ಕಾರ್ಯದ ಹಿನ್ನೆಲೆಯಲ್ಲಿ ಎಷ್ಟೊಂದು ದೀರ್ಘಕಾಲದ, ನಿಷ್ಠೆಯಿಂದ ಕೂಡಿದ ನಿರಂತರ ಪರಿಶ್ರಮದ ಅಭ್ಯಾಸವಿದೆ ಎಂಬುದನ್ನು ಯಾರೂ ಊಹಿಸಿಕೊಳ್ಳಬಹುದು. 

    ದೊಡ್ಡವರು ಬದುಕನ್ನು ಪ್ರಾರಂಭಿಸುವಾಗಲೇ ದೊಡ್ದವರಾಗಿರಲಿಲ್ಲ ಅಥವಾ ಮಹಾ ಮೇಧಾವಿಗಳಾಗಿರಲ್ಲಿಲ. ಆದರೆ ಕಲಿಯುತ್ತ, ಕಲಿಯುತ್ತ, ಕಲಿಯುತ್ತಲೇ ತಮ್ಮ ಮೇಲ್ಮೆಯನ್ನು ಸಾಧಿಸಿದರು. ದಾರಿಯು ಸರಿಯಾಯಿತೆಂದರೆ ಗುರಿಯು ದೊರೆಯುವುದು ಎನ್ನುವುದಕ್ಕೆ ಅವರ ಸಿದ್ಧಿ ಸಾಕ್ಷಿ ನೀಡುತ್ತದೆ. 

ಗುರುವಾರ, ಏಪ್ರಿಲ್ 24, 2014

ಯಾವ ಮೋಹನ ಮುರಲಿ ಕರೆಯಿತು


ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು ?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ?
ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ ?
ವಿವಶವಾಯಿತು ಪ್ರಾಣ ; ಹಾ ! ಪರವಶವು ನಿನ್ನೀ ಚೇತನ ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ?

~~~ ಗೋಪಾಲಕೃಷ್ಣ ಅಡಿಗ

ಬುಧವಾರ, ಏಪ್ರಿಲ್ 23, 2014

ತಾಳ್ಮೆ


ನೆಟ್ಟ ಸಸಿ ಫಲ ಬರುವ ತನಕ ಶಾಂತಿಯ ತಾಳು,
ಕಟ್ಟು ಬುತ್ತಿಯ ಮುಂದೆ ಉಣಲುಂಟು ತಾಳು,
ಕಷ್ಟ ಬಂದರೆ ತಾಳು ಕಂಗೆಡದೆ ತಾಳು,
ದುಷ್ಟ ಮನುಜರು ಪೇಳ್ವ ನಿಷ್ಟುರದ ನುಡಿ ತಾಳು,
ಉಕ್ಕು ಹಾಲಿಗೆ ನೀರನಿಕ್ಕುವಂದದಿ ತಾಳು.
~ ~~ ಶ್ರೀ ವಾದಿರಾಜ ಯತಿವರ್ಯರು

ಭಾನುವಾರ, ಜನವರಿ 29, 2012

ಬಂಗಾರದ ಮನುಷ್ಯ ಚಲನ ಚಿತ್ರದ ಶೀರ್ಷಿಕೆ ಗೀತೆ

ಸರ್ವ ಸಮತಾ ಭಾವಕಿನ್ತತಧಿಕ ತಪವಿಲ್ಲ 
ಕ್ಷಮೆಯ ಮೀರಿಸುವಂತ ಸದ್ಗುಣವು ಬೇರಿಲ್ಲ 
ಡುಡಿಮೆಗಿಂ ಹಿರಿದಾದ ದೇವ ಪೂಜೆಯವಿಲ್ಲ 
ಶ್ರೀ ನಿಧಿಯ ಒಲುಮೆಗೆ ಮತ್ತೇನು ಬೇಕಿಲ್ಲ