ಶುಕ್ರವಾರ, ಆಗಸ್ಟ್ 8, 2014

ಗುರಿ ಮತ್ತು ದಾರಿ

[ಆಕರ ಗ್ರಂಥ : ಬದುಕಲು ಕಲಿಯಿರಿ - ಸ್ವಾಮಿ ಜಗದಾತ್ಮಾನಂದ]

    ಪಶ್ಚಿಮದ ಪ್ರಸಿದ್ಧ ಸಂಗೀತಗಾರ ಬಿಥೊವೆನ್ ಒಮ್ಮೆ ಗಾನ ಗೋಷ್ಠಿಯನ್ನು ಮುಗಿಸಿ ಮೇಲೆದ್ದಾಗ ಅವನ ಅದ್ಭುತ ಕಲಾ ನೈಪುಣ್ಯವನ್ನು ಕಂಡು ಕೇಳಿ ಚಕಿತರಾದ ಜನರೂ, ಸ್ನೇಹಿತರೂ, ಅಭಿಮಾನಿಗಳೂ ಅವನನ್ನು ಸುತ್ತುವರಿದರು. ಅವರೆಲ್ಲರೂ ಮೂಕವಿಸ್ಮಿತರಾಗಿ ಅವನನ್ನೇ ಬೆರಗುಗಣ್ಣುಗಳಿಂದ ನೋಡುತ್ತಿದರು. ಪ್ರಶಂಸೆಯ ಮಾತುಗಳನ್ನು ಹೇಳಲಾರದಷ್ಟು ಭಾವತನ್ಮಯರಾಗಿದ್ದರು ಅವರೆಲ್ಲ. ತನ್ನ ನಾದಮಧುರ್ಯದಿಂದ ಅಷ್ಟೊಂದು ಜನರ ಹ್ರನ್ಮನಗಳನ್ನು ಸೆಳೆದಿದ್ದನಾತ. ಆ ಗಂಭೀರ ಮೌನವನ್ನು ಉತ್ಸಾಹಿ ಮಹಿಳೆಯೊಬ್ಬಳು ತನ್ನ ಮಾತಿನಿಂದ ಭೇಧಿಸಿದಳು; 'ಮಹಾಶಯ, ದೇವರು ನನಗೆ ಈ ಆಸಾಧಾರಣ ಪ್ರತಿಭೆಯ ಕೊಡುಗೆಯನ್ನು ಕೊಟ್ಟಿದರೆ ' ಎಂದವಳು ಉದ್ಗರಿಸಿದಳು.

    ಬಿಥೊವೆನ್ ಹೀಗೆಂದ 'ನನ್ನಲಿರುವುದೆಂದು ನೀನಂದುಕೊಡಿರುವ ಈ ಅಸಾಧಾರಣ ಪ್ರತಿಭೆ ದೇವರ ಕೊಡುಗೆ ಅನ್ನುತೀಯ, ನೀನೂ ಈ ಕೊಡುಗೆಯನ್ನು ಪಡೆಯಬಹುದು. ಏನು ಮಾಡಬೇಕು ಗೊತ್ತೇ? ದಿನವೂ ಎಂಟು ಗಂಟೆಗಳ ಕಾಲ ನಲ್ವತ್ತು ವರ್ಷಗಳವರೆಗೆ ಬಿಡದೇ ಪಿಯಾನೋ ಅಭ್ಯಾಸ ಮಾಡು. ಅಷ್ಟೇ ಸಾಕು, ನೀನು ನನ್ನಂತೆಯೇ ಅದ್ಬುತ ಕೊಡುಗೆಯನ್ನು ಪಡೆಯುತ್ತಿ.'



    ಈ ಅನುಭವದ ಮಾತಿನ ಹಿನ್ನೆಲೆಯಲ್ಲಿ ದಾರಿಯು ಸರಿಯಾಯಿತೆಂದರೆ ಗುರಿಯು ದೊರತೇ ದೊರೆಯುತದೆನ್ನುವ ಅಮರ ತತ್ವ ಅಡಗಿದೆಯಲ್ಲವೇ?

    ವಾಗ್ಗೇಯಕಾರ ಶ್ರೀ ವಾಸುದೇವಾಚಾರ್ಯರು ತಮ್ಮ 'ನೆನಪುಗಳು' ಎನ್ನುವ ಪುಸ್ತಕದಲ್ಲಿ ಪೀಟಿಲು ವಾದನದಲ್ಲಿ ಅದ್ವಿತಿಯರೆನಿಸಿಕೊಂಡ ಒಬ್ಬ ವಿದ್ವಾಂಸರನ್ನು ಸ್ಮರಿಸುತ್ತಾರೆ. ಅವರ ಹೆಸರು ಕೃಷ್ಣಯ್ಯರ್. ವಾದ್ಯ ಬಾರಿಸುವದರಲ್ಲಿ ಅವರಿಗೆ ಎಂಥ ಸ್ವಾಮಿತ್ವವಿತ್ತೆನ್ನುವುದಕ್ಕೆ ಆಚಾರ್ಯರು ತಾವು ಕಂಡ ಒಂದು ನಿದರ್ಶನವನ್ನಿತ್ತಿದ್ದಾರೆ. ಒಂದು ಕಛೇರಿಯಲ್ಲಿ  ಕೃಷ್ಣಯ್ಯರ್ ಪಕ್ಕವಾದ್ಯ ನುಡಿಸುತ್ತಿದಾಗ ಅಕಸ್ಮಾತ್ತಾಗಿ ಪಿಟೀಲಿನ ತಂತಿ ಕಿತ್ತು ಹೋಯಿತು. ತಾನು ಹಾಡಿದ ಸಂಗೀತವನ್ನು ನುಡಿಸಲು ಸಾಧ್ಯವಾಗದೆ ಬೇಕೆಂತಲೇ ತಂತಿಯನ್ನು ಕಿತ್ತು ಆಟ ಹೂಡಿದ್ದಾರೆ ಎಂಬರ್ಥದ ವ್ಯಂಗ್ಯ ನಗುವನ್ನು ಬೀರಿದ ಗಾಯಕ. ಕೃಷ್ಣಯ್ಯರ್ ಕೋಪದಿಂದ, 'ನಿಮ್ಮ ಸಂಗೀತಕ್ಕೆ ಪಕ್ಕವಾದ್ಯ ನುಡಿಸಲು ನಾಲ್ಕು ತಂತಿಗಳು ಬೇಕೇ? ಇದೋ ಇನ್ನೂ ಎರಡು ತಂತಿಯನ್ನು ಕಿತ್ತೆಸೆಯುತ್ತೇನೆ' ಎಂದು ಒಂದೇ ತಂತಿಯಲ್ಲಿ ಕಛೇರಿಯನ್ನು ನಿರ್ವಹಿಸಿದರಂತೆ. 

    ಈ ಅದ್ಭುತ ಕಾರ್ಯದ ಹಿನ್ನೆಲೆಯಲ್ಲಿ ಎಷ್ಟೊಂದು ದೀರ್ಘಕಾಲದ, ನಿಷ್ಠೆಯಿಂದ ಕೂಡಿದ ನಿರಂತರ ಪರಿಶ್ರಮದ ಅಭ್ಯಾಸವಿದೆ ಎಂಬುದನ್ನು ಯಾರೂ ಊಹಿಸಿಕೊಳ್ಳಬಹುದು. 

    ದೊಡ್ಡವರು ಬದುಕನ್ನು ಪ್ರಾರಂಭಿಸುವಾಗಲೇ ದೊಡ್ದವರಾಗಿರಲಿಲ್ಲ ಅಥವಾ ಮಹಾ ಮೇಧಾವಿಗಳಾಗಿರಲ್ಲಿಲ. ಆದರೆ ಕಲಿಯುತ್ತ, ಕಲಿಯುತ್ತ, ಕಲಿಯುತ್ತಲೇ ತಮ್ಮ ಮೇಲ್ಮೆಯನ್ನು ಸಾಧಿಸಿದರು. ದಾರಿಯು ಸರಿಯಾಯಿತೆಂದರೆ ಗುರಿಯು ದೊರೆಯುವುದು ಎನ್ನುವುದಕ್ಕೆ ಅವರ ಸಿದ್ಧಿ ಸಾಕ್ಷಿ ನೀಡುತ್ತದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ