ಸೋಮವಾರ, ನವೆಂಬರ್ 6, 2017

ಏನಿದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ?

  "ಗೋ" (Go) ಚೀನಾದ ಅತ್ಯಂತ ಪುರಾತನ ಬೋರ್ಡ್ ಆಟ. ಇದು ಸುಮಾರು ೨೫೦೦ ವರ್ಷ ಹಳೆಯದಾಗಿದ್ದು, ಈಗಲೂ ಚೀನಾ, ದಕ್ಷಿಣ ಕೊರಿಯಾ, ಜಪಾನ್ ಹಾಗು ಬೇರೆ ದೇಶಗಳಲ್ಲಿ ಪ್ರಚಲಿತವಾಗಿದೆ. ಇದು ಅತ್ಯಂತ ಕಠಿಣ ಹಾಗು ಬೌದ್ಧಿಕ ಸಾಮರ್ಥ್ಯದ ಆಟ. ಒಂದೊಂದು ಸಲ ಎರಡೆರಡು ದಿನವಾದರೂ ಆಟ ಮುಗಿಯುವುದಿಲ್ಲ. ಚೆಸ್ನಂತೆ ಗೋ ಆಟದ ಗ್ರಾಂಡ್ ಮಾಸ್ಟರ್ಗಳಿದ್ದಾರೆ. ಚೀನಾದ ಕೀ ಜೀ ಗೋನಲ್ಲಿ ಜಗತ್ತಿಗೇ ನಂಬರ್ ಒನ್.
   ಇದೇ ಕಳೆದ ಮೇನಲ್ಲಿ ನಡೆದ ಪಂದ್ಯದಲ್ಲಿ,  ಕೀ ಜೀ ಸೋಲನ್ನು ಅನುಭವಿಸಬೇಕಾಯಿತು. ಈತನನ್ನು ಸೋಲಿಸಿದುದು ಮನುಷ್ಯನಲ್ಲ, ಕಂಪ್ಯೂಟರ್! ಗೂಗಲ್ನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್  (AI) ಸಾಫ್ಟ್ವೇರ್ "ಅಲ್ಫಾ ಗೋ"(AlphaGo). ಯಾವುದು ಅಸಾಧ್ಯವೆಂದು ತಿಳಿದಿದ್ದರೋ ಅದನ್ನೇ ಸಾಧಿಸಿತು AI ಸಾಫ್ಟ್ವೇರ್.

ಕೀ ಜೀ ಹಾಗೂ ಅಲ್ಫಾ ಗೋ ನಡುವೆ ಬಿರುಸಿನ ಆಟ

   "ಆರ್ಟಿಫಿಷಿಯಲ್ ಇಂಟೆಲಿಜೆನ್ಸ್" (ಕೃತಕ ಬುದ್ಧಿ ಸಾಮರ್ಥ್ಯ) - AI ಈ ಶಬ್ದಗಳನ್ನು ದಿನದಲ್ಲಿ ಒಂದು ಸಲವಾದರೂ ಕೇಳುತ್ತೇವೆ. ಇಲ್ಲಿಯವರೆಗೆ ಕಂಪ್ಯೂಟರ್, ಮೊಬೈಲುಗಳು ಮಾಡುತ್ತಿರುವ ಅಮೋಘ ಕೆಲಸಗಳಿಂದ ಹೇಗಿದು ಭಿನ್ನ?

   ಎಲ್ಲರಿಗೂ ತಿಳಿದಿರುವಂತೆ ಕಂಪ್ಯೂಟರ್ನ ಮಿದುಳು ಸಾಫ್ಟ್ವೇರ್. ಸಾಫ್ಟ್ವೇರಿನಲ್ಲಿ ಕಂಪ್ಯೂಟರ್ ಏನೇನು ಮಾಡಬೇಕು, ಹೇಗೆ ಮಾಡಬೇಕು ಅಂತೆಲ್ಲ ನಿರ್ದೇಶನಗಳಿರುತ್ತವೆ (ಕೋಡ್) . ನಿರ್ದೇಶನಗಳಂತೆ ಕಂಪ್ಯೂಟರ್ ಯಥಾವತ್ತಾಗಿ ಕೆಲಸ ಮಾಡುತ್ತದೆ. ಕೂಡಿಸು ಅಂದ್ರೆ ಕೂಡಿಸು, ಗುಣಿಸು ಅಂದ್ರೆ ಗುಣಿಸು. ಇದು ನಾವು ನೋಡುವ ಸಾಮಾನ್ಯ ಸಾಫ್ಟ್ವೇರಿನ ಲಕ್ಷಣ.

   ಇನ್ನು AI ವಿಚಾರಕ್ಕೆ ಬಂದಾಗ, ಇದು ಕೂಡ ಸಾಫ್ಟ್ವೇರ್. ಆದರೆ ವಿಶೇಷ ಸಾಫ್ಟ್ವೇರ್. ಈ ಸಾಫ್ಟ್ವೇರ್ನ್ನು ಮಗುವಿಗೆ ಹೋಲಿಸಬಹುದು. ಮಗು ತನ್ನ ಮನೆ ಮಂದಿ, ಶಾಲೆ, ಸುತ್ತ ಮುತ್ತಲಿನ ವಾತಾವರಣದಿಂದ ತನ್ನ ಬೌದ್ಧಿಕ ಸಾಮರ್ಥ್ಯದಲ್ಲಿ ಬೆಳವಣಿಗೆ ಕಾಣುತ್ತದೆ. ಅದೇ ರೀತಿ AI ಕೂಡ. ಅದು ಕೂಡ ಹೆಚ್ಚು ಹೆಚ್ಚು ಮಾಹಿತಿಯನ್ನು ಓದಿ, ತಿಳಿದು ತನ್ನ ಕಾರ್ಯ ಕ್ಷಮತೆಯನ್ನು ವೃದ್ಧಿಸಿಕೊಳ್ಳುತ್ತದೆ.

   ಜೀವನದಲ್ಲಿ ಕಠಿಣ ಪರೀಕ್ಷೆಗಳು ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅದೇ ರೀತಿ AI ಕೂಡ ತನಗೆ ಒಡ್ಡಿದ ಪರೀಕ್ಷೆಗಳಿಗೆ ತಕ್ಕಂತೆ ತನ್ನ ಸಾಮರ್ಥ್ಯ ಹೆಚ್ಚಿಸುತ್ತ ಹೋಗುತ್ತದೆ. ಗೋ ನಲ್ಲಿ ಗೆದ್ದ ಅಲ್ಫಾ ಗೋ ಸಾಫ್ಟ್ವೇರ್ ಕೂಡ ಮೊದಲು ಎಷ್ಟೋ ಸಲ ಸೋಲುಂಡಿಯೇ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದು.

   ಇಂದು ನಮ್ಮ ಜೀವನದ ಹಲವು ಕ್ಷೇತ್ರಗಳನ್ನು AI ಆವರಿಸುತ್ತಿದೆ. AI ಕೇವಲ ರೋಬೋಟ್ಗಳಿಗೆ ಸೀಮಿತವಾಗಿಲ್ಲ. ಅದು ಸ್ವಯಂ ಚಾಲಿತ ಡ್ರೈವರ್ ರಹಿತ ಕಾರ್ ಆಗಿರಬಹುದು, ಶಾಪಿಂಗ್ ಪಾರ್ಸೆಲ್ ತಲುಪಿಸುವ ಡ್ರೋನ್ ಆಗಿರಬಹುದು, ಸಮೂಹ ಮಾಧ್ಯಮಗಳ ಮೂಲಕ ನಿರ್ದಿಷ್ಟ ಪ್ರದೇಶದ ಜನರ ಮೂಡ್ ತಿಳಿಯುವುದುದಾಗಿರಬಹುದು, ಮುಖ ಅಥವಾ ಧ್ವನಿ ಗುರುತಿಸುವದಾಗಿರಬಹುದು, ಭಾಷಾಂತರ ಆಗಿರಬಹುದು, ಬರವಣಿಗೆ ಗುರುತಿಸುವುದಾಗಿರಬಹುದು, ರೋಗಗಳ ತೀವ್ರತೆಯನ್ನು ಸಮಯವಿರುವಾಗಲೇ ಪತ್ತೆ ಮಾಡುವುದು, ವೈಯಕ್ತಿಕ ಹಣಕಾಸು ಸಲಹೆಗಳನ್ನು ನೀಡುವ ಆಪ್ ಆಗಿರಬಹುದು, ಜಗತ್ತಿನ ಪ್ರಮುಖ ಸುದ್ದಿಗಳ ಗೂಗಲ್ ನ್ಯೂಸ್ ಆಗಿರಬಹುದು, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಗೂಗ್ಲ್ನ ಅಸಿಸ್ಟೆಂಟ್ ಅಥವಾ ಆಪಲ್ನ ಸಿರಿ ಆಗಿರಬಹುದು... ಇತ್ಯಾದಿ 

   ಹೀಗೆ AI ಹಲವು ದಿನ ನಿತ್ಯದ ಕೆಲಸಗಳನ್ನು ಯಾಂತ್ರಿಕರಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ನಿರುದ್ಯೋಗದ ಭಯ ಹುಟ್ಟಿರುವುದು ನಿಜವಾದರೂ, ಹೊಸ ಕೆಲಸಗಳು, ಹೊಸ ಕೌಶಲ್ಯಗಳನ್ನು ಕಲಿಯಬೇಕಾಗಿರುವುದೂ ಅಷ್ಟೇ ನಿಜ.    ಪ್ರತಿಯೊಂದು ಆವಿಷ್ಕಾರ, ಸಂಶೋಧನೆ ಜೊತೆಗೆ ಅದರದೇ ಆದ ಉಪಯೋಗ ಹಾಗು ದುರುಪಯೋಗಗಳು ಜೊತೆಯಲ್ಲಿರುತ್ತವೆ. ಇದಕ್ಕೆ AI ಹೊರತಾಗಿಲ್ಲ. ಅದನ್ನು ಮತ್ತ್ಯಾವಾಗಾದ್ರು ಚರ್ಚಿಸೋಣ.

ಬುಧವಾರ, ನವೆಂಬರ್ 1, 2017

ಕನ್ನಡ ಉಳಿಸಿ ಬೆಳೆಸಲು ನಾನು ಮಾಡಬಹುದಾದ ಮೂರು ಕೆಲಸಗಳು

ಕನ್ನಡ ಉಳಿಸಿ ಬೆಳೆಸಲು ನಾನು ಮಾಡಬಹುದಾದ ಮೂರು ಕೆಲಸಗಳು:

   ೧. ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುವುದಕ್ಕೆ  ಪ್ರೇರೇಪಿಸುವುದು
ಕನ್ನಡ ಭಾಷೆ ಕೇವಲ ಮಾತುಕತೆಯ ಮಾಧ್ಯಮವಲ್ಲ. ಅದು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದ ತಳಹದಿ. ಪ್ರತಿಯೊಂದು ಭಾಷೆ ತನ್ನ ಜೊತೆ ತನ್ನ ಜನ್ಮ ಸ್ಥಳದ ಸಂಸ್ಕೃತಿ, ಆಚಾರ, ಹಾಗೂ ವಿಚಾರಗಳನ್ನು ಬಳುವಳಿಯಾಗಿ ಹೊತ್ತು ತರುತ್ತದೆ.
ಇದಕ್ಕೆ ಇಂಗ್ಲಿಷ್, ಹಿಂದಿ, ಅಥವಾ ಮತ್ತ್ಯಾವುದೇ ಭಾಷೆ ಹೊರತಾಗಿಲ್ಲ. ಇದನ್ನು ಅರ್ಥ ಮಾಡಿಕೊಂಡರೆ ಗೊಂದಲಮಯ ರೋಬೋಟ್ಗಳ ಬದಲಾಗಿ ಸುಸಂಸ್ಕ್ರತ ನಾಗರಿಕರ ನಿರ್ಮಾಣ ಸಾಧ್ಯವಾದೀತು. ಇಲ್ಲಿ "ಗೊಂದಲಮಯ ರೋಬೋಟ್" ಯಾಕಂದ್ರೆ ಇವ್ರು ಬೆಳೆಯುವುದು ಕನ್ನಡ ವಾತಾವರಣದಲ್ಲಿ ಆದರೆ ತಲೆಯಲೆಲ್ಲಾ ಬೇರೆ ಭಾಷೆ, ಸಂಸ್ಕೃತಿ ! 


   ೨. ಕೆಲವಂದು ಅನಿವಾರ್ಯ ಸಂಧರ್ಭಗಳನ್ನು ಹೊರತುಪಡಿಸಿ, ಎಲ್ಲ ಕಡೆ ಕನ್ನಡ ಬಳಕೆ
ನಮ್ಮ ಭಾಷೆಯನ್ನು ಉಳಿಸಿ ಬೆಳೆಸಲು, ಮೊದಲನೆಯದಾಗಿ ಕನ್ನಡದಲ್ಲಿ ಹೆಮ್ಮೆಯಿಂದ ಮಾತಾಡುವುದನ್ನು ಕಲಿಯಬೇಕು. ಇದಕ್ಕೆ ನಮ್ಮ ಸಂಸ್ಕೃತಿ, ಪರಂಪರೆಯ ಜ್ನ್ಯಾನ ಹಾಗು ಸ್ವಲ್ಪ ಧೈರ್ಯ, ತಾಳ್ಮೆ  ಅಗತ್ಯ. ನಮ್ಮ ಗೌರವಯುತ ಪರಂಪರೆಯ ಅರಿವು ನಮ್ಮಲಿ ಹೆಮ್ಮೆ ಮೂಡಿಸುವುದು. ಈ ಕೆಲಸ ನಮ್ಮ ಪಠ್ಯ, ಸಮಾಜದ ಹಿರಿಯರು, ಸಮೂಹ ಮಾಧ್ಯಮಗಳು ವ್ಯವಸ್ಥಿತ ರೀತಿಯಲ್ಲಿ ಮಾಡಿದರೆ ಸಾಧ್ಯವಾದೀತು. ಕನಿಕರ ಕನ್ನಡತನ ನಿಲ್ಲಬೇಕು! ಕನ್ನಡ ನಾಡಿನಲ್ಲಿ ನೆಲೆಸಿದವರು ಕನ್ನಡವನ್ನು ಕಲಿತು ಮಾತನಾಡಲು ಪ್ರಯತ್ನಿಸಬೇಕು. ಕೆಲವೊಂದು ಸನ್ನಿವೇಶಗಳನ್ನು ಹೊರತುಪಡಿಸಿ,  ಕನಿಕರದಿಂದ ಪರ ಭಾಷಿಕರ ಜೊತೆ ಅವರದೇ ಭಾಷೆಯಲ್ಲಿ ಮಾತಾಡುವುದನ್ನು ನಿಲ್ಲಿಸಬೇಕು.

   ೩. ಅಂತರ್ಜಾಲದಲ್ಲಿ ಕನ್ನಡ ಪ್ರಚಾರ ಹಾಗೂ ಪ್ರಸಾರ
ಕನ್ನಡದಲ್ಲಿ ಶಬ್ದ ಸಂಗ್ರಹಕ್ಕೆ ಯಾವುದೇ ಕೊರತೆ ಇಲ್ಲ. ಶಿವರಾಂ ಕಾರಂತರ ಹಲವು ಆವೃತ್ತಿಯ "ವಿಜ್ಞಾನ ಪ್ರಪಂಚ " ಎಷ್ಟು ಜನರಿಗೆ ಗೊತ್ತು? ವಿಜ್ಞಾನದ ಪ್ರತಿಯೊಬ್ಬ ವಿದ್ಯಾರ್ಥಿ ಓದಲೇ ಬೇಕಾದ ಜ್ಞಾನದ ಕಣಜಗಳು. ಕನ್ನಡದಲ್ಲಿ ಹಲವು ವೈಜ್ಞಾನಿಕ ಪದಗಳು ಆ ಗ್ರಂಥಗಳಲ್ಲಿವೆ. ಆದರೂ ಬದಲಾದ ಸನ್ನಿವೇಶಕ್ಕೆ, ಹೊಸ ಪದಗಳ ಜೋಡಣೆ ಆಗಬೇಕು. ಇವತ್ತು ಯಾವುದೇ ಒಂದು ಪದಕ್ಕೆ ಕನ್ನಡ ಸಮಾನಾರ್ಥಕ್ಕೆ ಯಾರನ್ನು ಸಂಪರ್ಕಿಸುವುದು? ಅಧಿಕೃತ ಕನ್ನಡ ರತ್ನ ಕೋಶದ ಆನ್ಲೈನ್ ಆವೃತ್ತಿ ರಚಿಸಬೇಕು. ಕನ್ನಡ ಪದಗಳ ಅಧಿಕೃತ ಕೇಂದ್ರೀಕೃತ ಉಲ್ಲೇಖ ವಿಭಾಗ ರಚನೆಯಾಗಬೇಕು. ಹೊಸ ಪದಗಳ ಬಗ್ಗೆ ಚರ್ಚೆ, ವಾದ, ಸಂವಾದಗಳಾಗಬೇಕು. ಸಮೂಹ ಮಾಧ್ಯಮಗಳಲ್ಲಿ ಹೊಸ ಪದ ಜೋಡಣೆಯ ಘೋಷಣೆಯಾಗಬೇಕು.
ಕನ್ನಡ ವಿಕಿಪೀಡಿಯದಲ್ಲಿ ನಮ್ಮಮ್ಮ ಪ್ರದೇಶ, ಜನ, ಹಬ್ಬ ಇತ್ಯಾದಿಗಳ ಬಗ್ಗೆ ಬರೆಯುವುದು. 

   ನಮ್ಮ ಭಾಷೆ, ಸಂಸ್ಕೃತಿ, ಇತಿಹಾಸದ  ಬಗ್ಗೆ ತಿಳಿವು ಹಾಗೂ ಹೆಮ್ಮೆ  ಇದ್ದಾಗ ಮಾತ್ರ ಕನ್ನಡ ರಾಜ್ಯೋತ್ಸವ ಸಾರ್ಥಕವಾದಿತು!