"ಗೋ" (Go) ಚೀನಾದ ಅತ್ಯಂತ ಪುರಾತನ
ಬೋರ್ಡ್ ಆಟ. ಇದು ಸುಮಾರು ೨೫೦೦ ವರ್ಷ ಹಳೆಯದಾಗಿದ್ದು, ಈಗಲೂ ಚೀನಾ, ದಕ್ಷಿಣ ಕೊರಿಯಾ,
ಜಪಾನ್ ಹಾಗು ಬೇರೆ ದೇಶಗಳಲ್ಲಿ ಪ್ರಚಲಿತವಾಗಿದೆ. ಇದು ಅತ್ಯಂತ ಕಠಿಣ ಹಾಗು ಬೌದ್ಧಿಕ
ಸಾಮರ್ಥ್ಯದ ಆಟ. ಒಂದೊಂದು ಸಲ ಎರಡೆರಡು ದಿನವಾದರೂ ಆಟ ಮುಗಿಯುವುದಿಲ್ಲ. ಚೆಸ್ನಂತೆ ಗೋ
ಆಟದ ಗ್ರಾಂಡ್ ಮಾಸ್ಟರ್ಗಳಿದ್ದಾರೆ. ಚೀನಾದ ಕೀ ಜೀ ಗೋನಲ್ಲಿ ಜಗತ್ತಿಗೇ ನಂಬರ್ ಒನ್.
ಇದೇ ಕಳೆದ ಮೇನಲ್ಲಿ ನಡೆದ ಪಂದ್ಯದಲ್ಲಿ, ಕೀ ಜೀ ಸೋಲನ್ನು ಅನುಭವಿಸಬೇಕಾಯಿತು.
ಈತನನ್ನು ಸೋಲಿಸಿದುದು ಮನುಷ್ಯನಲ್ಲ, ಕಂಪ್ಯೂಟರ್! ಗೂಗಲ್ನ ಆರ್ಟಿಫಿಷಿಯಲ್
ಇಂಟೆಲಿಜೆನ್ಸ್ (AI) ಸಾಫ್ಟ್ವೇರ್ "ಅಲ್ಫಾ ಗೋ"(AlphaGo). ಯಾವುದು ಅಸಾಧ್ಯವೆಂದು
ತಿಳಿದಿದ್ದರೋ ಅದನ್ನೇ ಸಾಧಿಸಿತು AI ಸಾಫ್ಟ್ವೇರ್.ಕೀ ಜೀ ಹಾಗೂ ಅಲ್ಫಾ ಗೋ ನಡುವೆ ಬಿರುಸಿನ ಆಟ |
ಎಲ್ಲರಿಗೂ ತಿಳಿದಿರುವಂತೆ ಕಂಪ್ಯೂಟರ್ನ ಮಿದುಳು ಸಾಫ್ಟ್ವೇರ್. ಸಾಫ್ಟ್ವೇರಿನಲ್ಲಿ ಕಂಪ್ಯೂಟರ್ ಏನೇನು ಮಾಡಬೇಕು, ಹೇಗೆ ಮಾಡಬೇಕು ಅಂತೆಲ್ಲ ನಿರ್ದೇಶನಗಳಿರುತ್ತವೆ (ಕೋಡ್) . ನಿರ್ದೇಶನಗಳಂತೆ ಕಂಪ್ಯೂಟರ್ ಯಥಾವತ್ತಾಗಿ ಕೆಲಸ ಮಾಡುತ್ತದೆ. ಕೂಡಿಸು ಅಂದ್ರೆ ಕೂಡಿಸು, ಗುಣಿಸು ಅಂದ್ರೆ ಗುಣಿಸು. ಇದು ನಾವು ನೋಡುವ ಸಾಮಾನ್ಯ ಸಾಫ್ಟ್ವೇರಿನ ಲಕ್ಷಣ.
ಇನ್ನು AI ವಿಚಾರಕ್ಕೆ ಬಂದಾಗ, ಇದು ಕೂಡ ಸಾಫ್ಟ್ವೇರ್. ಆದರೆ ವಿಶೇಷ ಸಾಫ್ಟ್ವೇರ್. ಈ ಸಾಫ್ಟ್ವೇರ್ನ್ನು ಮಗುವಿಗೆ ಹೋಲಿಸಬಹುದು. ಮಗು ತನ್ನ ಮನೆ ಮಂದಿ, ಶಾಲೆ, ಸುತ್ತ ಮುತ್ತಲಿನ ವಾತಾವರಣದಿಂದ ತನ್ನ ಬೌದ್ಧಿಕ ಸಾಮರ್ಥ್ಯದಲ್ಲಿ ಬೆಳವಣಿಗೆ ಕಾಣುತ್ತದೆ. ಅದೇ ರೀತಿ AI ಕೂಡ. ಅದು ಕೂಡ ಹೆಚ್ಚು ಹೆಚ್ಚು ಮಾಹಿತಿಯನ್ನು ಓದಿ, ತಿಳಿದು ತನ್ನ ಕಾರ್ಯ ಕ್ಷಮತೆಯನ್ನು ವೃದ್ಧಿಸಿಕೊಳ್ಳುತ್ತದೆ.
ಜೀವನದಲ್ಲಿ ಕಠಿಣ ಪರೀಕ್ಷೆಗಳು ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅದೇ ರೀತಿ AI ಕೂಡ ತನಗೆ ಒಡ್ಡಿದ ಪರೀಕ್ಷೆಗಳಿಗೆ ತಕ್ಕಂತೆ ತನ್ನ ಸಾಮರ್ಥ್ಯ ಹೆಚ್ಚಿಸುತ್ತ ಹೋಗುತ್ತದೆ. ಗೋ ನಲ್ಲಿ ಗೆದ್ದ ಅಲ್ಫಾ ಗೋ ಸಾಫ್ಟ್ವೇರ್ ಕೂಡ ಮೊದಲು ಎಷ್ಟೋ ಸಲ ಸೋಲುಂಡಿಯೇ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದು.
ಇಂದು ನಮ್ಮ ಜೀವನದ ಹಲವು ಕ್ಷೇತ್ರಗಳನ್ನು AI ಆವರಿಸುತ್ತಿದೆ. AI ಕೇವಲ ರೋಬೋಟ್ಗಳಿಗೆ ಸೀಮಿತವಾಗಿಲ್ಲ. ಅದು ಸ್ವಯಂ ಚಾಲಿತ ಡ್ರೈವರ್ ರಹಿತ ಕಾರ್ ಆಗಿರಬಹುದು, ಶಾಪಿಂಗ್ ಪಾರ್ಸೆಲ್ ತಲುಪಿಸುವ ಡ್ರೋನ್ ಆಗಿರಬಹುದು, ಸಮೂಹ ಮಾಧ್ಯಮಗಳ ಮೂಲಕ ನಿರ್ದಿಷ್ಟ ಪ್ರದೇಶದ ಜನರ ಮೂಡ್ ತಿಳಿಯುವುದುದಾಗಿರಬಹುದು, ಮುಖ ಅಥವಾ ಧ್ವನಿ ಗುರುತಿಸುವದಾಗಿರಬಹುದು, ಭಾಷಾಂತರ ಆಗಿರಬಹುದು, ಬರವಣಿಗೆ ಗುರುತಿಸುವುದಾಗಿರಬಹುದು, ರೋಗಗಳ ತೀವ್ರತೆಯನ್ನು ಸಮಯವಿರುವಾಗಲೇ ಪತ್ತೆ ಮಾಡುವುದು, ವೈಯಕ್ತಿಕ ಹಣಕಾಸು ಸಲಹೆಗಳನ್ನು ನೀಡುವ ಆಪ್ ಆಗಿರಬಹುದು, ಜಗತ್ತಿನ ಪ್ರಮುಖ ಸುದ್ದಿಗಳ ಗೂಗಲ್ ನ್ಯೂಸ್ ಆಗಿರಬಹುದು, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಗೂಗ್ಲ್ನ ಅಸಿಸ್ಟೆಂಟ್ ಅಥವಾ ಆಪಲ್ನ ಸಿರಿ ಆಗಿರಬಹುದು... ಇತ್ಯಾದಿ
ಹೀಗೆ AI ಹಲವು ದಿನ ನಿತ್ಯದ ಕೆಲಸಗಳನ್ನು ಯಾಂತ್ರಿಕರಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ನಿರುದ್ಯೋಗದ ಭಯ ಹುಟ್ಟಿರುವುದು ನಿಜವಾದರೂ, ಹೊಸ ಕೆಲಸಗಳು, ಹೊಸ ಕೌಶಲ್ಯಗಳನ್ನು ಕಲಿಯಬೇಕಾಗಿರುವುದೂ ಅಷ್ಟೇ ನಿಜ. ಪ್ರತಿಯೊಂದು ಆವಿಷ್ಕಾರ, ಸಂಶೋಧನೆ ಜೊತೆಗೆ ಅದರದೇ ಆದ ಉಪಯೋಗ ಹಾಗು ದುರುಪಯೋಗಗಳು ಜೊತೆಯಲ್ಲಿರುತ್ತವೆ. ಇದಕ್ಕೆ AI ಹೊರತಾಗಿಲ್ಲ. ಅದನ್ನು ಮತ್ತ್ಯಾವಾಗಾದ್ರು ಚರ್ಚಿಸೋಣ.